ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಸಂತ್ರಸ್ತರ ನೆರವಿಗೆ ನಿಂತ ವಿಜಯಪುರ ಜಿಲ್ಲಾಧಿಕಾರಿ ನಿಷ್ಠೆಗೆ ಸಲಾಂ
ಸರ್ಕಾರಿ ಅಧಿಕಾರಿಗಳು ಎಂದರೆ ರಜೆಗಳ ಮಧ್ಯೆ ಕೆಲಸ ಮಾಡುವವರು, ನಿಧಾನವೇ ಪ್ರಧಾನ ಎಂದು ತಿಳಿದಿರುವವರು, ಸಾರ್ವಜನಿಕರನ್ನು ಅಲೆಸುವವರು ಎಂಬ ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಆದರೆ, ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಇದನ್ನು ದೂರ ಮಾಡಿದ್ದು, ಅಜ್ಜ ವಿಧಿವಶರಾದ ಸುದ್ದಿ ತಿಳಿದ ಮೇಲೂ ಅಂತಿಮ ದರ್ಶನಕ್ಕೂ ತೆರಳದೆ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ಕೃಷ್ಣಾ, ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿದು ಅನೇಕ ಗ್ರಾಮಗಳಿಗೆ ನುಗ್ಗಿದ ಪರಿಣಾಮ ಹಲವಾರು ಮಂದಿ ನಿರಾಶ್ರಿತರಾಗಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸ್ವತಃ ಜಿಲ್ಲಾಧಿಕಾರಿ ಶ್ರಮಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಕಚೇರಿಯಲ್ಲಿ ಕೂರದೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ಕೊಟ್ಟು, ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ವೈ.ಎಸ್.ಪಾಟೀಲ್ ಅವರ ತಾಯಿಯ ತಂದೆ ಮಲ್ಲಪ್ಪ ನಾಯ್ಕರ್ (91) ಕಳೆದ ಶುಕ್ರವಾರ ರಾತ್ರಿ ಬೈಲಹೊಂಗಲ ತಾಲೂಕಿನ ನಾಗನೂರಿನಲ್ಲಿ ನಿಧನರಾಗಿದ್ದಾರೆ. ಬಾಲ್ಯದಿಂದ ಸಾಕಿ ಸಲಹಿದ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಅವರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಜಿಲ್ಲೆಯ ಯಾವುದೇ ಅಧಿಕಾರಿಗಳಿಗೂ ರಜೆ ನೀಡದೇ ಸ್ವತಃ ಕೆಲಸ ಮಾಡುವ ಮೂಲಕ ನೆರೆ ಸಂತ್ರಸ್ತರ ಕಣ್ಣೀರು ಒರೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. |