Log in
  • ಮುಖಪುಟ
  • ಕೃಷಿಯ ಜಲಕ್ಷಾಮಕ್ಕೆ ಮುಚ್ಚಿಗೆಯ ಪರಿಹಾರ

ಕೃಷಿಯ ಜಲಕ್ಷಾಮಕ್ಕೆ ಮುಚ್ಚಿಗೆಯ ಪರಿಹಾರ

ಸಂತೋಷ್ ರಾವ್ ಪೆರ್ಮುಡ

ಕೃಷಿಯೆಂದರೆ ನೀರಿನ ಕೊರತೆ ಎಂಬ ಮಾತು ಎಲ್ಲಾ ಕೃಷಿಕರಲ್ಲಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಬೀಳುವ ದಿನಗಳಲ್ಲಿ ಇದು ಸತ್ಯವೂ ಹೌದು. ಇನ್ನು ಬರಗಾಲಪೀಡಿತ ಹಾಗೂ ಅತ್ಯಂತ ಕಡಿಮೆ ಮಳೆಬೀಳುವ ಪ್ರದೇಶಗಳಲ್ಲಂತೂ ಕೃಷಿಯಪಾಡು ಹೇಳತೀರದು. ಕೃಷಿಜಮೀನಿಗೆ ಮತ್ತು ಗಿಡಮರಗಳಿಗೆ ಸುರಿದ ನೀರೆಲ್ಲಾ ನೇರವಾಗಿ ಭಾಷ್ಪೀಕರಣಗೊಂಡು ವಾತಾವರಣವನ್ನು ಸೇರಿಬಿಡುತ್ತದೆ. ಇದರಿಂದ ಕೃಷಿಜಮೀನಿಗೆ ಸಮರ್ಪಕವಾದ ನೀರು ದೊರೆಯದೇ ಸಸ್ಯಗಳು ಬಾಡಿ ಕೃಷಿಯು ಸೊರಗುತ್ತಿದೆ. ಬೇಸಿಗೆ ಆರಂಭವಾದರೆ ಸಾಕು ಬಿಸಿಲಿನ ಝಳಕ್ಕೆ ವಾತಾವರಣದ ಹಾಗೂ ಮಣ್ಣಿನ ತೇವಾಂಶವೂ ನಶಿಸಿಹೋಗುತ್ತಿದೆ. ಗಿಡ-ಮರಗಳಿಗೆ ಹೇಗೆ ನೀರುಣಿಸಿದರೂ ಅದು ಆವಿಯಾಗುವ ಅಥವಾ ಡ್ರಿಪ್‌ಮೂಲಕ ಗಿಡಗಳಿಗೆ ನೀರುಣಿಸಿದರೂ ಗಿಡಗಳ ಬೇರಿನವರೆಗೆ ನೀರು ತಲುಪದೇ ಸಸ್ಯಗಳು ಒಣಗುವ ಸಮಸ್ಯೆ ಎಲ್ಲಾ ರೈತರಿಗಿದೆ. ಹುಲುಸಾಗಿ ಬೆಳೆದಿರುವ ಕೃಷಿಬೆಳೆಗಳನ್ನು ಬೇಸಗೆ ಮುಗಿಯುವವರೆಗೂ ಜತನದಿಂದ ಕಾಪಾಡಿಕೊಂಡು ಜಮೀನಿನ ತೇವಾಂಶವನ್ನು ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ.

ಮುಚ್ಚಿಗೆಮಾಡುವುದು ಹೇಗೆ?

ಮಗು ಅಮ್ಮನ ಮಡಿಲಲ್ಲಿ ಮಲಗಿದ್ದಾಗ ಅಮ್ಮನ ಸೆರಗನ್ನು ಮಗುವಿಗೆ ಹೊದಿಸಿದರೆ ಮಗು ಎಷ್ಟು ಆರಾಮವಾಗಿ ನಿದ್ದೆ ಮಾಡುತ್ತದೆಯೋ ಅದೇ ರೀತಿ ಭೂಮಿತಾಯಿಯ ಮೇಲೆ ಮುಚ್ಚಿಗೆಯ ಸೆರಗನ್ನು ಹಾಸಿದರೆ ಸಸ್ಯಗಳೂ ಆರಾಮವಾಗಿ ಬೆಳೆಯುತ್ತವೆ. ಮಣ್ಣಿನ ಮೇಲ್ಭಾಗದ ಪದರಕ್ಕೆ ವಿವಿಧ ರೀತಿಯ ವಸ್ತುಗಳನ್ನು ಅಳವಡಿಸಿ ಮಣ್ಣಿನ ತೇವಾಂಶವನ್ನು ಕಾಪಾಡುವುದಕ್ಕೆ ಮುಚ್ಚಿಗೆ ಎನ್ನುತ್ತಾರೆ. ಕೃಷಿಜಮೀನಿನ ಮೇಲ್ಪದರಕ್ಕೆ ವಿವಿಧ ಸಾಮಗ್ರಿಗಳಿಂದ ಮುಚ್ಚಿಗೆಯನ್ನು ಹಾಕುವುದರಿಂದ ಮಣ್ಣಿನ ತೇವಾಂಶವನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಮಣ್ಣಿನ ಆರೋಗ್ಯವೂ ಹೆಚ್ಚುತ್ತದೆ. ಮುಚ್ಚಿಗೆಯನ್ನು ಹಾಕುವುದರಿಂದ ಕೃಷಿಜಮೀನಿನಲ್ಲಿ ನಿರುಪಯುಕ್ತ ಕಳೆಗಳು ಹುಟ್ಟಿಕೊಳ್ಳುವುದನ್ನು ತಡೆಯಬಹುದಾಗಿದೆ. ನೆಲಮುಚ್ಚಿಗೆ ಹಾಕುವ ವಿಧಾನವು ಸಂಪೂರ್ಣವಾಗಿ ಸಾವಯವ ಕೃಷಿಯ ಒಂದು ಮಾದರಿ ಅಲ್ಲ. ಮುಚ್ಚಿಗೆಯನ್ನು ಶಾಶ್ವತವಾದ ವಿವಿಧ ರೀತಿಯ ಪಾಲಿಥಿನ್ ಹಾಳೆಗಳು, ತಾತ್ಕಾಲಿಕವಾದ ಕೃಷಿಯ ನಿರುಪಯುಕ್ತ ವಸ್ತುಗಳಾದ ಅಡಿಕೆಯ ಸೋಗೆ, ಸಿಪ್ಪೆ ಹಾಗೂ ಕೃಷಿ ಜಮೀನಿನ ನಿರುಪಯುಕ್ತ ವಸ್ತುಗಳನ್ನು ಗಿಡಗಳ ಬುಡಕ್ಕೆ ಅಥವಾ ಗಿಡಗಳ ಪಾತಿಗಳಿಗೆ ಹಾಕುವ ಮೂಲಕ ಅಥವಾ ಸಂಪೂರ್ಣವಾಗಿ ಕೃಷಿಜಮೀನನ್ನು ಹೊದಿಕೆ ಮಾಡುವ ಮೂಲಕವೂ ಮಾಡಬಹುದು..

ಮುಚ್ಚಿಗೆಯನ್ನು ಮಾಡಬೇಕೆಂದರೆ ಜಮೀನಿನಲ್ಲಿ ಲಭ್ಯವಿರುವ ಬೆಳೆಯ ಉಳಿಕೆಗಳು, ಉದುರಿದ ಎಲೆಗಳು, ಕಸಕಡ್ಡಿ, ಹುಲ್ಲು, ಕಳೆ ಇತ್ಯಾದಿಗಳನ್ನು ಸಂಗ್ರಹಿಸಬೇಕು. ಜಮೀನಿನಲ್ಲಿ ಇವುಗಳು ಲಭ್ಯವಾಗದಿದ್ದರೆ ಅಕ್ಕಪಕ್ಕದ ಬೆಟ್ಟ,-ಕಾಡುಗಳಲ್ಲಿ ದೊರೆಯುವ ಒಣತ್ಯಾಜ್ಯಗಳನ್ನು ಸಂಗ್ರಹಿಸಿ ಕೃಷಿಜಮೀನಿನಲ್ಲಿ ಬಿಸಿಲು ಬೀಳುವ ಪ್ರದೇಶದಲ್ಲಿ ನೆಲಕಾಣದಂತೆ ಹರಡಬೇಕು. ಕಾಂಪೋಸ್ಟ್ ಮತ್ತು ಗೊಬ್ಬರಗಳಿಂದ ಹಾಗೂ ಕೃಷಿತ್ಯಾಜ್ಯಗಳಿಂದ ಮುಚ್ಚಿಗೆಯನ್ನು ಮಾಡಿದಲ್ಲಿ ಈ ತ್ಯಾಜ್ಯಗಳು ಅತ್ಯಂತ ವೇಗವಾಗಿ ಮತ್ತು ಸ್ವಾಭಾವಿಕವಾಗಿ ಮಣ್ಣಿನಲ್ಲಿ ಕರಗಿ ಭೂಮಿಗೆ ಸೇರ್ಪಡೆಗೊಳ್ಳುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗುತ್ತದೆ. ಮುಚ್ಚಿಗೆಯನ್ನು ಸಸ್ಯಗಳ ಬುಡದಿಂದ ಎರಡು ಇಂಚಿನಷ್ಟು ದಪ್ಪಕ್ಕೆ ಮಾಡಬಹುದು. ಈ ರೀತಿಯ ಮುಚ್ಚಿಗೆಯನ್ನು ವಾಣಿಜ್ಯ ಬೆಳೆಗಳು ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಅಳವಡಿಸಿಕೊಳ್ಳಬಹುದು. ಇದರಿಂದಾಗಿ ಕೃಷಿಯಲ್ಲಿನ ಇಳುವರಿಯೂ ಹೆಚ್ಚಿ, ಭೂಮಿಯ ಸಾರವನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳಬಹುದು.ಸಣ್ಣ ಹಣ್ಣಿನ ಗಿಡಗಳಾದಲ್ಲಿ ಅವುಗಳಿಗೆ ಒಣಗಿದ ತೆಂಗಿನ ಗರಿಗಳಿಂದ ನೆರಳುಮಾಡಿ ನೆಲವನ್ನು ಕಾಣದಂತೆ ಮುಚ್ಚಬೇಕು. ಸಣ್ಣ ಗಿಡಗಳು ಬಿಸಿಲಿನ ಝಳಕ್ಕೆ ಒಳಗಾಗಿ ಒಣಗುತ್ತಿದ್ದಲ್ಲಿ ಅವುಗಳಿಗೆದಟ್ಟ ಎಲೆಗಳಿರುವ ಗಿಡಗಳನ್ನು ಕತ್ತರಿಸಿ ಚಾವಣಿಯಂತೆ ತಡಿಕೆ ಕಟ್ಟಿದಲ್ಲಿ ಅದರಿಂದ ಉದುರುವ ಎಲೆಗಳೂ ಸಹಿತ ಸಸ್ಯಗಳಿಗೆ ಕಾಂಪೋಸ್ಟ್ ಆಗಿ ಬಳಕೆಯಾಗುವುದರ ಜೊತೆಗೆ ಬಿಸಿಲ ಝಳದಿಂದ ಗಿಡಗಳನ್ನು ರಕ್ಷಿಸಿಕೊಳ್ಳಬಹುದು.

ಜಮೀನಿನಲ್ಲಿರುವ ಪ್ರತಿಯೊಂದು ಗಿಡ ಅಥವಾ ಸಸಿಗಳ ಬುಡಕ್ಕೆ ಲಭ್ಯವಿರುವ ವಿವಿಧ ಸಸ್ಯಗಳ ನಿರುಪಯುಕ್ತ ತರಗೆಲೆ ಹಾಗೂ ನಿರುಪಯುಕ್ತ ತ್ಯಾಜ್ಯಗಳನ್ನು ಹಂತಹಂತವಾಗಿ ಹಾಕಬೇಕು. ನಂತರ ಒಂದಷ್ಟು ಹಸಿತ್ಯಾಜ್ಯಗಳನ್ನು ಹರಡಿ ಅದರ ಮೇಲೆ ತೆಳುವಾಗಿ ಮಣ್ಣಿನ ಪದರವನ್ನು ಹಾಕಬೇಕು. ನಂತರ ಮತ್ತೊಂದು ಪದರ ತರಗೆಲೆ ಹಾಗೂ ತ್ಯಾಜ್ಯ ಮತ್ತು ಕೃಷಿ ಉಳಿಕೆಗಳನ್ನು ಹಾಕಿ ಕೊನೆಯ ಹಂತದಲ್ಲಿ ಸಂಪೂರ್ಣವಾಗಿ ಹಸಿರೆಲೆಗಳನ್ನು ಹೊದಿಸಬೇಕು. ಮೇಲ್ಭಾಗದಲ್ಲಿ ಒಣತ್ಯಾಜ್ಯಗಳನ್ನು ಮುಚ್ಚಿಗೆಮಾಡಿದರೆ ಬೆಂಕಿ ಅನಾಹುತ ಸಂಭವಿಸಿದಾಗ ಗಿಡಗಳಿಗೂ ಬೆಂಕಿ ಪಸರಿಸುವ ಸಾಧ್ಯತೆಗಳಿರುತ್ತವೆ.

1. ಜಮೀನಿನಲ್ಲಿರುವ ನಿರುಪಯುಕ್ತ ವಸ್ತುಗಳಿಂದಲೇ ಮುಚ್ಚಿಗೆಯನ್ನು ಮಾಡುವುದರಿಂದ ಜಮೀನಿನಲ್ಲಿ ಲಭ್ಯವಿರುವ ತೇವಾಂಶವನ್ನು ಸಸಿಗಳ ಬುಡದಲ್ಲಿ ಉಳಿಯುವಂತೆ ಮಾಡಿ ಮಣ್ಣಿನ ಸಾರವನ್ನೂ ರಕ್ಷಿಸಿಕೊಳ್ಳಬಹುದು.

2. ಸಸಿಗಳ ಬುಡಕ್ಕೆ ಮುಚ್ಚಿಗೆ ಮಾಡಲಾದ ಸಾವಯವ ನಿರುಪಯುಕ್ತ ವಸ್ತುಗಳ ಮೇಲೆ ನೀರನ್ನು ಸಿಂಪಡಿಸುವುದರಿಂದ ನಿಧಾನವಾಗಿ ಅವುಗಳು ಅಲ್ಲೇ ಕೊಳೆತು ಸಸಿಗಳಿಗೆ ಉತ್ತಮ ಗೊಬ್ಬರವಾಗುತ್ತದೆ. ಇದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ವೃದ್ಧಿಯಾಗಿ ಬೆಳೆಗಳಿಗೆ ಅವಶ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.

3. ಮುಚ್ಚಿಗೆಯನ್ನು ಮಾಡುವುದರಿಂದ ಜಮೀನಿನ ಫಲವತ್ತಾದ ಮೇಲ್ಮಣ್ಣು ಗಾಳಿ ಮತ್ತು ನೀರಿಗೆ ಕೊಚ್ಚಿಕೊಂಡು ಹೋಗಿ ಮಣ್ಣಿನ ಸವಕಳಿಯಾಗುವುದನ್ನು ತಡೆಯಬಹುದು.

4. ಮುಚ್ಚಿಗೆಯನ್ನು ಮಾಡುವುದರಿಂದ ಸಸಿಗಳ ಬುಡಕ್ಕೆ ಸಾವಯವ ಅಂಶ ಗಣನೀಯವಾಗಿ ಸೇರ್ಪಡೆಯಾಗುವುದರಿಂದ ಮತ್ತು ಈ ಮುಚ್ಚಿಗೆಯು ಮಣ್ಣಿನಲ್ಲಿ ನೀರನ್ನು ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸಿ ದೀರ್ಘಕಾಲ ಜಮೀನನ್ನು ತೇವಾಂಶದಿಂದ ಇರಿಸುತ್ತದೆ.

5. ಮುಚ್ಚಿಗೆಯನ್ನು ಮಾಡುವುದರಿಂದ ಜಮೀನಿನ ಮಣ್ಣಿನ ರಚನೆಯ ನಿಧಾನವಾಗಿ ಸುಧಾರಿಸಿ ಮಣ್ಣಿನೊಳಗೆ ಪದರಗಳುಂಟಾಗಿ ತಂಪಾದ ವಾತಾವರಣವನ್ನು ನಿರ್ಮಿಸುತ್ತವೆ. ಇದರಿಂದ ಎರೆಹುಳಗಳು ಹಾಗೂ ಸೂಕ್ಷ್ಮಾಣುಜೀವಿಗಳ ಚಟುವಟಿಕೆಗಳು ಹೆಚ್ಚಾಗಿ ಮಣ್ಣಿನ ಸಾರ ನಿಧಾನವಾಗಿ ಏರುತ್ತದೆ.

6. ಮುಚ್ಚಿಗೆಯನ್ನು ಮಾಡುವುದರಿಂದ ಜಮೀನಿನಲ್ಲಿ ಬೆಳೆಯುವ ಅನಗತ್ಯ ಕಳೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

7. ಗಿಡಗಳಿಗೆ ಪಾಲಿಥೀನ್ ಮುಚ್ಚಿಗೆಯನ್ನು ಮಾಡುವುದರಿಂದ ಗಿಡಗಳ ಕೆಳಭಾಗದಲ್ಲಿರುವ ಪಾಲಿಥೀನ್ ಹಾಳೆಗಳಿಗೆ ಬಿದ್ದ ಸೂರ್ಯನ ಬೆಳಕು ಪ್ರತಿಫಲಿತಗೊಂಡು ಗಿಡಗಳ ಎಲೆಗಳ ಕೆಳಭಾಗಕ್ಕೆ ಬೀಳುವುದರಿಂದ ಸಸ್ಯದ ಎಲ್ಲಾ ಭಾಗಕ್ಕೂ ಸೂರ್ಯನ ಬೆಳಕು ಲಭ್ಯವಾಗಿ ಸಸ್ಯಗಳು ಹುಲುಸಾಗಿ ಬೆಳೆಯುತ್ತದೆ.

8. ಜೀವಂತ ಮುಚ್ಚಿಗೆಯನ್ನು ತರಕಾರಿ ಬಳ್ಳಿಗಳಿಂದ ಮಾಡಿದಾಗ ಮುಖ್ಯ ಬೆಳೆಗಳ ಮಧ್ಯೆ ಉಪಬೆಳೆಗಳೂ ಬೆಳೆದು ರೈತನ ಆದಾಯವನ್ನು ಹೆಚ್ಚಿಸಿ ಕಳೆ ನಿಯಂತ್ರಿಸುತ್ತದೆ.


ತ್ತರಿಸಿದ ನಿರುಪಯುಕ್ತ ಹುಲ್ಲು, ಮರದ ತರಗೆಲೆಗಳು, ಒಣ ಹುಲ್ಲು , ಹುಲ್ಲಿನ ದಂಟುಗಳು, ಅಡುಗೆಯ ನಿರುಪಯುಕ್ತ ವಸ್ತುಗಳು, ತೊಗಟೆಯ ತುಣುಕುಗಳು, ಮರದ ಪೂರ್ಣ ತೊಗಟೆಯ ಚೂರುಗಳು, ಮರದಹೊಟ್ಟು, ತೆಂಗಿನಕರಟ ಮತ್ತು ಸಿಪ್ಪೆಗಳು, ಮರದ ಚೂರುಗಳು, ಪೇಪರ್ ತುಣುಕುಗಳು, ಉಣ್ಣೆ ಹಾಗೂ ಪ್ರಾಣಿಗಳ ಮತ್ತು ಮನುಷ್ಯನ ತ್ಯಾಜ್ಯಗಳಿಂದ ಕೃಷಿಜಮೀನಿಗೆ ಹಾಗೂ ಸಸ್ಯಗಳಿಗೆ ಸಾವಯವ ಉಳಿಕೆಯನ್ನು ಮುಚ್ಚಿಗೆಯನ್ನು ಮಾಡಲು ಬಳಸಿಕೊಳ್ಳಬಹುದು. ಈ ಎಲ್ಲಾ ವಸ್ತುಗಳನ್ನು ಅಳವಡಿಸಿ ಗಿಡಗಳಿಗೆ ಮುಚ್ಚಿಗೆಯನ್ನು ಮಾಡುವುದರಿಂದ ನೆಲದ ತೇವವನ್ನು ಕಾಪಾಡುವುದರೊಂದಿಗೆ ಈ ವಸ್ತುಗಳು ಸಾವಯವ ಗೊಬ್ಬರವಾಗಿಯೂ ಶೀಘ್ರವಾಗಿ ಸಸ್ಯಗಳ ಬೇರುಗಳನ್ನು ತಲುಪುತ್ತದೆ.

2. ಹಟ್ಟಿಗೊಬ್ಬರ, ಕಾಂಪೋಸ್ಟ್ ಮುಂತಾದ ಗೊಬ್ಬರಗಳ ಉತ್ಪನ್ನಗಳನ್ನು ಸಸ್ಯಗಳ ಬುಡಕ್ಕೆ ಮುಚ್ಚಿಗೆಯನ್ನು ಮಾಡುವುದರಿಂದ ಸಸ್ಯಗಳಿಗೆ ಉಂಟಾಗಬಹುದಾದ ವಿಷಕಾರಕ ಅಂಶಗಳನ್ನು (Phytotoxicity) ತಡೆಯಲು ಸಾಧ್ಯವಾಗುತ್ತದೆ. ಗೊಬ್ಬರಗಳನ್ನು ಸಸ್ಯಗಳಿಗೆ ಮುಚ್ಚಿಗೆಯಾಗಿ ಬಳಸುವ ಪೂರ್ವದಲ್ಲಿ ಅನಗತ್ಯ ಕಳೆಯನ್ನು ತಡೆಯುವ ನಿಟ್ಟಿನಲ್ಲಿ ಕಾಂಪೋಸ್ಟ್ ಹಣ್ಣು ಅಥವಾ ತರಕಾರಿ ಬೀಜಗಳಿಂದ ಮುಕ್ತವಾಗಿರಬೇಕು.

3. ಈ ಮಾದರಿಯ ಮುಚ್ಚಿಗೆಯನ್ನು ಸಂಪೂರ್ಣವಾಗಿ ನಿರುಪಯುಕ್ತ ರಬ್ಬರ್ ತುಣುಕುಗಳು ಮತ್ತು ನಿರುಪಯುಕ್ತ ಚಕ್ರಗಳನ್ನು ಕತ್ತರಿಸಿ ಗಿಡಗಳ ಬುಡದಲ್ಲಿ ಹರಡಲಾಗುತ್ತದೆ. ಇದರಿಂದ ಗಿಡಗಳಿಗೆ ಉಣಿಸಿದ ನೀರು ಗಿಡಗಳ ಬುಡಕ್ಕೆ ಇಳಿದು ನೀರು ಆವಿಯಾಗದಂತೆ, ಫಲವತ್ತಾದ ಮಣ್ಣು ಸವೆತವಾಗದಂತೆ ತಡೆದು ಶಾಖವನ್ನು ನಿಯಂತ್ರಿಸುತ್ತದೆ.

4. ಪ್ಲಾಸ್ಟಿಕ್‌ಮಾದರಿಯ ಮುಚ್ಚಿಗೆಯ ಕೃಷಿಯಲ್ಲಿ ಸಸಿಗಳನ್ನು ಉದ್ದನೆಯ ಪಾತಿಗಳಲ್ಲಿ ನಾಟಿಮಾಡಲಾಗುತ್ತದೆ. ಗಿಡಗಳು ಮೊಳಕೆಯೊಡೆದು ಸಸಿಗಳಾಗುತ್ತಿದ್ದಂತೆಯೇ ಪಾತಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಪ್ಲಾಸ್ಟಿಕ್‌ಹೊದಿಕೆಯನ್ನು ಹಾಕಲಾಗುತ್ತದೆ. ಪ್ಲಾಸ್ಟಿಕ್‌ಹೊದಿಕೆಗಳ ನಡುವಿನಲ್ಲಿರುವ ತೂತಿನ ಮೂಲಕ ಸಸಿಗಳು ಹೊರಬರುವುದರಿಂದ ಸಸಿಗಳ ಬುಡವು ಸಂಪೂರ್ಣವಾಗಿ ಪ್ಲಾಸ್ಟಿಕ್ ಹೊದಿಕೆಯೊಳಗಿರುತ್ತದೆ. ಇದರಿಂದ ಗಿಡಗಳಿಗೆ ಡ್ರಿಪ್‌ಮೂಲಕ ಒದಗಿಸಿದ ನೀರು ಗಿಡಗಳ ಬುಡವನ್ನು ತಲುಪಿ ತೇವವನ್ನು ದೀರ್ಘಕಾಲ ಕಾಪಾಡುತ್ತದೆ.

5. ಮಧ್ಯ ಮಗಾತ್ರದ ಕಲ್ಲಿನ ತುಣುಕುಗಳನ್ನು ಸಸಿಗಳ ಬುಡದಲ್ಲಿ ಸಮಾನಾಂತರವಾಗಿ ಹರಡುವುದರ ಮೂಲಕ ಕಲ್ಲಿನ ಮಾದರಿಯ ಮುಚ್ಚಿಗೆಯನ್ನು ಮಾಡಲಾಗುತ್ತದೆ. ಈ ಮಾದರಿಯ ಮುಚ್ಚಿಗೆಯಲ್ಲಿ ನೀರು ಸರಾಗವಾಗಿ ಗಿಡಗಳ ಬುಡದಲ್ಲಿ ಇಂಗಿ ಭೂಮಿಯ ಒಳಗಿನ ತೇವಾಂಶವನ್ನು ಆವಿಯಾಗದಂತೆ ತಡೆದು ಸಸ್ಯದ ಬುಡದಲ್ಲಿ ಶಾಖವನ್ನು ನಿಯಂತ್ರಿಸುತ್ತದೆ.

6. ಜೀವಂತ ಮಗುವನ್ನು ತಾಯಿ ತನ್ನ ಎದೆಯಮೇಲೆ ಹಾಕಿಕೊಂಡಂಥ ಅನುಭವವು ಈ ರೀತಿಯ ಮುಚ್ಚಿಗೆಯನ್ನು ಕೃಷಿಜಮೀನಿಗೆ ಮಾಡುವುದರಿಂದ ಭೂತಾಯಿಗೆ ಆಗುತ್ತದೆ. ಇಲ್ಲಿ ಬಳ್ಳಿಗಳನ್ನು, ವಿಶೇಷವಾಗಿ ಸೌತೆ, ಕುಂಬಳ, ಅಲಸಂದಿ ಮುಂತಾದ ಬಳ್ಳಿಗಳನ್ನು ತೋಟದ ಒಂದಿಂಚು ಜಾಗವೂ ಖಾಲಿ ಇರದಹಾಗೆ ಹಬ್ಬಿಸಬೇಕು. ಇದರಿಂದ ಜಮೀನಿನಲ್ಲಿ ಅನಗತ್ಯ ಕಳೆಗಳು ಬೆಳೆಯುವುದನ್ನು ತಡೆದು ಗಿಡಗಳ ಬುಡದ ತೇವಾಂಶವನ್ನು ಕಾಪಾಡುತ್ತದೆ.

ಅಮೆರಿಕಾದ ಕೇಂದ್ರ ಪೆನ್ಸಿಲ್ವೈನಿಯಾ ಹಾಗೂ ಉತ್ತರ ಕ್ಯಾಲಿಫೋರ್ನಿಯಾದ ಕೆಲವೊಂದು ಪ್ರದೇಶಗಳಲ್ಲಿ ಮುಚ್ಚಿಗೆಯನ್ನು ಮಾಡಲು ಸಾಮಾನ್ಯವಾಗಿ ಕೆಲವೊಂದು ಮರಗಳ ತೊಗಟೆಯ ಚಕ್ಕೆಗಳನ್ನು ವಿವಿಧ ಉತ್ಪಾದಕರು ಮತ್ತು ಪೂರೈಕೆದಾರರಿಂದ ಖರೀದಿಸಿ ತಮ್ಮ ಕೃಷಿಜಮೀನಿನ ಸಸ್ಯಗಳ ಬುಡಕ್ಕೆ ಹರಡುತ್ತಾರೆ.

ಜಲಕ್ಷಾಮದ ಹಾಗೂ ಬರಗಾಲದ ಈ ದಿನಗಳಲ್ಲಿ ಭೂಮಿಯಲ್ಲಿ ಕೃಷಿ ಹಾಗೂ ವೃಕ್ಷವನ್ನು ಬೆಳೆಸಬೇಕೆಂದರೆ ಅತ್ಯಂತ ಕಡಿಮೆಪ್ರಮಾಣದ ನೀರಿನ ಬಳಕೆಯೊಂದಿಗೆ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ. ಇಂತಹ ಸವಾಲನ್ನು ಎದುರಿಸಿ ಕೃಷಿಮಾಡಬೇಕೆಂದರೆ ಅನಿವಾರ್ಯವಾಗಿ ರೈತ ತನ್ನ ಕೃಷಿಯಲ್ಲಿ ವಿವಿಧ ರೀತಿಯ ಮುಚ್ಚಿಗೆಯನ್ನು ಮಾಡಲೇಬೇಕಾದ ಅನಿವಾರ್ಯತೆಯಿದೆ. ಹಾಗೂ ಮುಚ್ಚಿಗೆಯು ಕೃಷಿಯಲ್ಲಿನ ನೀರಿನ ಕೊರತೆ, ಮಣ್ಣಿನ ಸವಕಳಿ, ಮಣ್ಣಿನ ಸಾರ ಕ್ಷೀಣಿಸುವಿಕೆ ಇವೇ ಮೊದಲಾದ ಸಮಸ್ಯೆಗಳಿಗೆ ಉತ್ತಮವಾದ ಪರಿಹಾರವಾಗಬಹುದು.

This forum is empty.


Copyright © 2019-20 Vikrama. All rights reserved. 

Powered by Wild Apricot Membership Software